ಜಪ	 - 
ಮಂತ್ರವೊಂದನ್ನು ಒಂದು ಸಲ ಅಥವಾ ಅನೇಕ ಸಲ ಉಚ್ಚರಿಸುವುದು ಜಪವೆನಿಸುತ್ತದೆ. ಮನಸ್ಸನ್ನು ಬಿಗಿಹಿಡಿದು ಮಂತ್ರಾರ್ಥದಲ್ಲಿ ಗಮನವಿಟ್ಟುಕೊಂಡು ಅಕ್ಷರಗಳನ್ನು ಅತಿವೇಗವಾಗಿ ಅಥವಾ ನಿಧಾನವಾಗಿ ಉಚ್ಚರಿಸದೆ, ಸಮವೇಗದಲ್ಲಿ ಪಠಿಸಬೇಕು. ಇದು ನಾಲ್ಕು ವಿಧವಾಗಿದೆ. ಮನಸ್ಸಿನಲ್ಲಿಯೇ ಅಕ್ಷರಗಳನ್ನು ಆವೃತ್ತಿ ಮಾಡುವುದು ಮಾನಸಜಪ. ಬಹಳ ಸಣ್ಣದನಿಯಲ್ಲಿ ಉಚ್ಚರಿಸುವುದು ಉಪಾಂಶುಜಪ. ದನಿಯಿಲ್ಲದೆ ನಾಲಗೆ-ಬಾಯಿ ಆಡಿದರೆ ಜಿಹ್ವಾ ಜಪ. ಇತರರಿಗೆ ಕೇಳಿಸುವಂತೆ ಜಪಿಸುವುದು ವಾಚಕಜಪ. ಇವು ಒಂದಕ್ಕಿಂತ ಒಂದು ಗುಣದಲ್ಲಿ ಹತ್ತರಷ್ಟು ಕಡಿಮೆ. ಮಾನಸಜಪ ಅತ್ಯಂತ ಉತ್ಕøಷ್ಟ. ವಾಚಕಜಪಕ್ಕೆ ಹೆಚ್ಚಿನ ಬೆಲೆಯಿಲ್ಲ. ಎಣಿಕೆಯಿಲ್ಲದ ಜಪದ ಫಲ ರಾಕ್ಷಸರ ಪಾಲಾಗುತ್ತದೆ. ಆದುದರಿಂದ ಉಪದಿಷ್ಟ ಜಪಸರವನ್ನು ಎಣಿಕೆಗೆ ಉಪಯೋಗಿಸಬೇಕು. ಜಪಕಾಲದಲ್ಲಿ ಅಂಗನ್ಯಾಸ ಕರನ್ಯಾಸಗಳ ಪೂರ್ವಕ ಮಂತ್ರದೇವತೆಯ ಧ್ಯಾನ ಮಾಡಬೇಕು. ಇದಕ್ಕೆ ಸಗರ್ಭಜಪವೆಂದು ಹೆಸರು. ಹಾಗೆ ದೇವತಾ ಧ್ಯಾನವಿಲ್ಲದ ಜಪ ಅಗರ್ಭಜಪವೆನಿಸುತ್ತದೆ. ಮಂತ್ರವೊಂದನ್ನು ನಿರ್ದಿಷ್ಟ ಸಂಖ್ಯೆಯಷ್ಟು ಜಪಿಸಿ ಅದರ ಹತ್ತನೆಯ ಒಂದು ಭಾಗದಷ್ಟು ಸಂಖ್ಯೆಯ ಹೋಮ ಮಾಡಬೇಕು; ತರ್ಪಣ, ಮಾರ್ಜನ, ಬ್ರಾಹ್ಮಣ ಭೋಜನಗಳನ್ನು ಕ್ರಮವಾಗಿ ಅದರ ಹಿಂದಿನದರ ಹತ್ತನೆಯ ಒಂದರಷ್ಟು ಸಂಖ್ಯೆಯಲ್ಲಿ ನಡೆಸಬೇಕು. ಈ ಕ್ರಮವನ್ನು ಪುರಶ್ಚರಣವೆನ್ನುತ್ತಾರೆ. ಮಂತ್ರೋಪದೇಶವಾದ ಮೇಲೆ ಒಂದು ಸಲ ಪುರಶ್ಚರಣ ಮಾಡಬೇಕು. ಅನಂತರ ಯಾವಜ್ಜೀವ ಆ ಮಂತ್ರವನ್ನು ನಿತ್ಯವೂ ಜಪಿಸುತ್ತಿದ್ದರೆ, ಅಂಥದನ್ನು ಪುರಶ್ಚರಣಪೂರ್ವಕ ಜಪವೆನ್ನುತ್ತಾರೆ. ಇದು ಉತ್ತಮ. ಪುರಶ್ಚರಣ ಮಾಡಿ ಅಲ್ಲಿಗೆ ನಿಲ್ಲಿಸಿದರೆ ಪುರಶ್ಚರಣ ಜಪವಾಗುತ್ತದೆ ಇದು ಮಧ್ಯಮ. ಪುರಶ್ಚರಣವನ್ನು ಮಾಡದೇ ನಿತ್ಯ ಜಪಿಸುವುದು ನಿತ್ಯಜಪ. ಇದು ಕನಿಷ್ಠ. ಜಪಿಸುವಾಗ ಮನಸ್ಸಿನಲ್ಲಿ ಯಾವ ಆತಂಕವೂ ಇರಬಾರದು; ಅಂತರಂಗ ಬಹಿರಂಗ ಶುದ್ಧವಿರಬೇಕು. ಜಪಕಾಲದಲ್ಲಿ ಆಲಸ್ಯ, ನಿದ್ದೆ, ಆಕಳಿಕೆ, ಸಿಂಬಳ ತೆಗೆಯುವುದು, ಉಗಿಯುವುದು, ನೀಚಾಂಗಗಳನ್ನು ಮುಟ್ಟುವುದು, ಕೋಪ-ಇವನ್ನು ವರ್ಜಿಸಬೇಕು. ಜಪಯಜ್ಞಕ್ಕಿಂತ ಅತಿಶಯವಾದ ಫಲ ಕೊಡುವಂಥ ಯಜ್ಞ ಇನ್ನಾವುದೂ ಇಲ್ಲ. ಜಪಿಸುವಂಥವನ ಬಳಿಗೆ ರಾಕ್ಷಸರಾಗಲೀ ಪಿಶಾಚ ಗ್ರಹಗಳಾಗಲೀ ಸರ್ಪ ಮೊದಲಾದುವಾಗಲೀ ಬರಲಾರವು.

	ಹಿಂದೂಗಳಲ್ಲಿ ಮುಖ್ಯವಾಗಿ ವಿಷ್ಣು, ಈಶ್ವರ, ಲಕ್ಷ್ಮಿ, ಪಾರ್ವತಿ, ರಾಮ, ಕೃಷ್ಣ ಮೊದಲಾದ ದೇವರುಗಳ ಜಪ ಮಾಡುತ್ತಾರೆ. ಅವರವರ ಆರಾಧ್ಯ ದೈವವನ್ನು ಕುರಿತು ಜಪಿಸುವುದು ವಾಡಿಕೆ. ಬೌದ್ಧರು ಬೌದ್ಧ ತ್ರಿಮೂರ್ತಿಗಳ ಹೆಸರುಗಳು ಅಥವಾ ವಿಶೇಷಣಗಳನ್ನು ಉಚ್ಚರಿಸುತ್ತಾರೆ. ಅಲ್ಲಾನ ನೂರೊಂದು ಹೆಸರುಗಳನ್ನು ಹೇಳುವುದೂ ಉಂಟು. ಕ್ರಿಶ್ಚನರಲ್ಲಿ ಪ್ರಾರ್ಥನೆಗಳ ಜಪ ಕಂಡು ಬರುತ್ತದೆ. ಕ್ರಿಸ್ತನ ಅಥವಾ ಮೇರಿಯ ಜೀವನದಲ್ಲಿ ಐದು ಸಂತೋಷಮಯ, ಐದು ದುಃಖಮಯ, ಐದು ಕೀರ್ತಿಪ್ರಾಯಗಳಾಗಿ ವಿಭಕ್ತವಾದ ಒಂದು, ಎರಡು ಅಥವಾ ಮೂರು ಮುಖ್ಯ ರಹಸ್ಯಗಳ ಧ್ಯಾನವನ್ನೂ ಮಾಡುತ್ತಾರೆ. ಒಂದೊಂದು ಧಾರ್ಮಿಕ ಪಂಥದವರೂ ಒಂದೊಂದು ವಿಶಿಷ್ಟ ರೀತಿಯ ಭಗವದ್ ಧ್ಯಾನವನ್ನು ಮಾಡುತ್ತಾರೆ.

ಜಪಸರ : ದೇವರ ನಾಮವನ್ನು ಜಪಿಸುವಾಗ ನಾಮದ ಎಣಿಕೆಗಾಗಿ ಉಪಯೋಗಿಉವ ಮಣಿಸರ. ಜಪಮಾಲೆ. ಸ್ಮರಣೀ ಎಂದೂ ಕರೆಯುತ್ತಾರೆ. ಇದು ಮೊದಲು ಅಸ್ತಿಸ್ವಕ್ಕೆ ಬಂದುದು ಏಷ್ಯದಲ್ಲಿಯೇ. ಭಾರತದಲ್ಲಿ ಬಹಳ ಪ್ರಾಚೀನ ಕಾಲದಿಂದಲೂ ಇದು ಬಳಕೆಯಲ್ಲಿದೆ. ಎಣಿಕೆಯಿಲ್ಲದ ಜಪ ವ್ಯರ್ಥವೆಂದು ಭಾವಿಸಿರುವುದರಿಂದ ಅದರ ಲೆಕ್ಕವಿಡಲು ಜಪಮಾಲೆ ಅವಶ್ಯ. ಚಿನ್ನ, ಬೆಳ್ಳಿ, ತಾಮ್ರ ಅಥವಾ ಕಬ್ಬಿಣದ ತಂತಿಯಲ್ಲಿ ಅಥವಾ ನೂಲಿನಲ್ಲಿ ಯೋಗ್ಯವಾದ ಮಣಿಗಳನ್ನು ಪೋಣಿಸಿ, ಸರ ಮಾಡಿಕೊಳ್ಳಬೇಕು. ರುದ್ರಾಕ್ಷಿ, ತುಲಸೀ (ಕಾಷ್ಠ), ಪ್ರತ್ರಂಜೀವಿ (ಕಾಷ್ಠ), ಭಸ್ಮದ ಗುಳಿಗೆ, ಬಿಲ್ವ (ಕಾಷ್ಠ), ದರ್ಭೆ (ಬೇರು) ಪಾದರಸದ ಗುಳಿಗೆ, ಸ್ಫಟಿಕ, ಹವಳ, ಕೆಂಪು, ಪಚ್ಚೆ, ಮುತ್ತು, ಚಿನ್ನ ಇತ್ಯಾದಿಗಳಿಂದ ಜಪಮಣಿಗಳನ್ನು ತಯಾರಿಸುತ್ತಾರೆ. ಅಕ್ಷತೆ (ಅಕ್ಕಿ), ಬೆರಳಿನ ಗಿಣ್ಣುಗಳು, ಧಾನ್ಯಗಳು, ಹೂವು, ಚಂದನ, ಮಣ್ಣು-ಇವು ಮಣಿ ಮಾಡಲು ತಕ್ಕವಲ್ಲ. ಜಪಸರಕ್ಕೆ ಉಪಯೋಗಿಸುವ ವಸ್ತುಗಳಿಗೆ ಬೇರೆ ಬೇರೆ ಫಲಗಳುಂಟು. ಉದಾಹರಣೆಗೆ ರುದ್ರಾಕ್ಷಿಯನ್ನು ಜಪಕ್ಕೆ ಉಪಯೋಗಿಸಿದಲ್ಲಿ ಭೋಗಮೋಕ್ಷಗಳು ದೊರೆಯುತ್ತವೆ. ಸ್ಫಟಿಕದಿಂದ ಮೋಕ್ಷ. ಶಂಖದಿಂದ ಐಶ್ವರ್ಯ, ಹವಳದಿಂದ ಧನಧಾನ್ಯಾದಿ, ಮುತ್ತಿನಿಂದ ಸರ್ವವಿದ್ಯೆ, ಪಾದರಸದಿಂದ ಎಲ್ಲ ವಿಧ ಕಾಮನೆಗಳು ಲಭಿಸುತ್ತವೆ. ಜಪಿಸುವ ಮಂತ್ರದ ದೇವತೆಗೂ ಮಣಿಗೂ ಸಂಬಂಧ ಉಂಟು. ಉದಾಹರಣಗೆ ರುದ್ರಾಕ್ಷಿ ಶಿವನಿಗೆ, ತುಲಸಿ ವಿಷ್ಣುವಿಗೆ. ಇಂಥ ಜಪಸರದಲ್ಲಿ ಒಂದು ಮಣಿ ಇತರ ಮಣಿಗಳಿಗಿಂತ ದಪ್ಪವಾಗಿರುತ್ತದೆ. ಅಥವಾ ಸರದಲ್ಲಿ ಬೇರೆಯಾಗಿರುವಂತೆ ಅದನ್ನು ಕಟ್ಟಲಾಗಿರುತ್ತದೆ. ಮೇರುವೆಂದು ಕರೆಯಲಾದ ಇದು ಲೆಕ್ಕಕ್ಕೆ ಸೇರುವುದಿಲ್ಲ. ಎಣಿಕೆ ಮಾಡುವಾಗ ಸರದ ಒಂದು ಆವೃತ್ತಿಯಾಯಿತೆಂದು ಇದರಿಂದ ತಿಳಿಯುತ್ತದೆ. ಸಾಮಾನ್ಯವಾಗಿ ಸರದಲ್ಲಿ 32,64 ಅಥವಾ 108 ಮಣಿಗಳಿರುತ್ತವೆ. ಮಾಲೆಯನ್ನು ಗುರುವಿನಿಂದ ಸ್ವೀಕರಿಸಬೇಕು. ಆಗಲೇ ಅದಕ್ಕೆ ಶಕ್ತಿ ಬರುವುದು. ಸರ ಕೆಳಕ್ಕೆ ಬೇಳದಂತೆ ಅಥವಾ ಅದಕ್ಕೆ ಮೈಲಿಗೆಯಾಗದಂತೆ ನೋಡಿಕೊಳ್ಳಬೇಕು.

ಶಾಕ್ತರಲ್ಲಿ ಕರಮಾಲೆಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಇದು ಮಣಿಸರವಲ್ಲ. ಬಲಗೈ ಬೆರಳುಗಳ ಗೆರೆಗಳೇ ಇದಕ್ಕೆ ಸಾಧನ. ಉಂಗುರದ ಬೆರಳಿನ ಮಧ್ಯದಿಂದ ಆರಂಭಿಸಿ, ಪ್ರದಕ್ಷಿಣ ಕ್ರಮದಲ್ಲಿ ಹತ್ತು ಗೆರೆಗಳನ್ನು ಹೆಬ್ಬೆಟ್ಟಿನಿಂದ ಎಣಿಸಿ ತೋರಬೆರಳ ಬುಡಕ್ಕೆ ಬಂದರೆ ಒಂದು ಸುತ್ತು ಆದಂತೆ. ಮಧ್ಯಬೆರಳಿನ ಕೆಳಗಿನ ಎರಡು ಗೆರೆಗಳು ಲೆಕ್ಕಕ್ಕೆ ಬಾರವು. ಸವೆಯುವು; ಮುಕ್ಕಾಗುವುದು, ಕಿತ್ತುಹೋಗುವುದು, ಮೈಲಿಗೆಯಾಗುವುದು ಎಂಬುದೇ ಮೊದಲಾದ ದೋಷಗಳು ಇತರ ರೀತಿಯ ಮಾಲೆಯಲ್ಲಿವೆ; ಕರಮಾಲೆಗೆ ಇಂಥ ಯಾವ ದೋಷಗಳೂ ಇಲ್ಲ. ನಿತ್ಯ ಜಪಕ್ಕೆ ಇದೇ ಶ್ರೇಷ್ಠವೆಂದು ಪರಿಗಣಿಸಲಾಗಿದೆ.

ಬೌದ್ಧ, ಜೈನ, ಮಹಮಧೀಯ, ಕ್ರಿಶ್ಚನ್ ಪಂಥಗಳವರೂ ಜಪಸರವನ್ನು ಉಪಯೋಗಿಸುತ್ತಾರೆ.
ಜೈನರ ಸರದಲ್ಲಿ 108ರ ಅಪವರ್ತನಗಳ ಸಂಖ್ಯೆಯಲ್ಲಿ ಮಣಿಗಳಿರುತ್ತವೆ. ಮಣಿಗಳ ಬಣ್ಣ ಕೆಂಪು, ಹಳದಿ, ಹಸಿರು, ಬಿಳಿ ಮತ್ತು ಕಪ್ಪು.

ಸಿಕ್ಕರು ಮಣಿಗಳ ಬದಲು ಉಣ್ಣೆಯ ನೂಲಿನಲ್ಲಿ 108 ಗಂಟುಗಳನ್ನು ಮಾಡಿ ಕೊಳ್ಳುತ್ತಾರೆ. ಕಬ್ಬಿಣದ ಸರಪಳಿಗಳಲ್ಲಿ ಪೋಣಿಸಿದ ಕಬ್ಬಿಣದ ಮಣಿಗಳ ಸರವೊಂದು ಇವರಲ್ಲಿ ಕಂಡುಬರುತ್ತದೆ. ಮಣಿಬಂಧದಲ್ಲಿ ಇಂಥ ಇಪ್ಪತ್ತೇಳು ಮಣಿಗಳ ಮಾಲೆಯನ್ನು ಇವರು ಕಟ್ಟಿಕೊಳ್ಳುತ್ತಾರೆ. ಇದು ಈ ಪಂಗಡದ ಒಂದು ಗುರುತೂ ಆಗಿದೆ.

ಭಾರತೀಯ ಬೌದ್ಧರ ಜಪಮಾಲೆಯಲ್ಲಿ ವಿಶೇಷವೇನಿಲ್ಲ. ಮನಸ್ಸಿನ ಸ್ಥಿತಿ ಅಥವಾ ಪಾಪ ಪ್ರವೃತ್ತಿಗಳ ಸಂಖ್ಯೆಯಾದ 108 ಮಣಿಗಳ ಒಂದು ಸರವಿದೆ. ಇದನ್ನು ಎಣಿಸುವುದರಿಂದ ಮನಸ್ಸಿನಮೇಲೆ ಹತೋಟಿ ಸಾಧ್ಯವೆಂದು ನಂಬಿಕೆ. ಇನ್ನೊಂದು ಚಿಕ್ಕ ಸರವಿದೆ. ಇದು ಬುದ್ಧನ ಮುಖ್ಯ ಶಿಷ್ಯರ ಪ್ರತೀಕ.

ಬರ್ಮದ ಬೌದ್ಧರಲ್ಲಿ 108 ಮಾಲೆ ಬಳಕೆಯಲ್ಲಿದೆ. ಸಂನ್ಯಾಸಿಗಳು ಕೆಲವರು ಬೋಧಿ ಎಂದು ಕರೆಯಲಾದ ಎಪ್ಪತ್ತೆರಡು ಮಣಿಗಳ ಸರವನ್ನು ಇಟ್ಟುಕೊಂಡಿದ್ದಾರೆ. ಮಂತ್ರಾಕ್ಷರಗಳನ್ನು ಬರೆಯಲಾದ ಎಲೆಗಳಿಂದ ಇದರ ಮಣಿಗಳನ್ನುಮಾಡಲಾಗಿದೆ ಎಂದು ಹೇಳುತ್ತಾರೆ.

ಟಿಬೆಟ್ಟಿನ ಲಾಮಾಗಳ ವೇಷದಲ್ಲಿ ಜಪಸರವೂ ಒಂದು ಮುಖ್ಯವಾದುದು. ಸಾಮಾನ್ಯ ಜನರೂ ಇದನ್ನು ಧರಿಸುತ್ತಾರೆ. ಇದರಲ್ಲಿ 108 ಮಣಿಗಳಿರುತ್ತವೆ ಮತ್ತು ಮೂರು ಮೇರುಗಳಿರುತ್ತವೆ.

ಚೀನೀ ಬೌದ್ಧರೂ ಮೂರು ಮೇರುಗಳಿರುವ 108 ಮಣಿಗಳ ಮಾಲೆಯನ್ನು ಬಳಸುತ್ತಾರೆ. ಮೇರುಗಳ ಬಣ್ಣ ಮತ್ತು ಗಾತ್ರಗಳು ಬೇರೆಯಾಗಿರುತ್ತವೆ. ಬುದ್ಧನ ಹದಿನೆಂಟು ಜನ ಶಿಷ್ಯರಿಗೆ ಸಮಾನವಾದ ಹದಿನೆಂಟು ಮಣಿಗಳ ಸರವೂ ಇವರಲ್ಲಿ ಕಂಡುಬರುತ್ತದೆ. ಸು=ಚು ಎಂದು ಕರೆಯಲಾದ ಇದರಲ್ಲಿ ಎರಡು ಮೇರುಗಳಿರುತ್ತವೆ. ನಮಸ್ಕಾರಗಳನ್ನು ಲೆಕ್ಕ ಮಾಡಲೂ ಇದನ್ನು ಬಳಸುತ್ತಾರೆ.

ಕೊರೆಯದ ಬೌದ್ಧರು 110 ಮಣಿಗಳ ಸರವ್ನು ಬಳಕೆಯಲ್ಲಿಟ್ಟುಕೊಂಡಿದ್ದಾರೆ. ಇದರಲ್ಲಿ ಎರಡು ದಪ್ಪ ಮಣಿಗಳಿರುತ್ತವೆ. ಒಂದು ಮೇರು; ಇನ್ನೊಂದು ಸರವನ್ನು ಇಬ್ಬಾಗ ಮಾಡುತ್ತದೆ. ಈ ಸರದ ಪ್ರತಿಮಣಿಗೂ ಒಂದೊಂದು ಹೆಸರು ಕೊಡಲಾಗಿದೆ.
ಜಪಾನೀ ಬೌದ್ಧರ ಸರ ಅತ್ಯಂತ ಸಂಯುಕ್ತ ರೂಪದ್ದು. ಜಪಾನೀಯರ ಪ್ರತಿಯೊಂದು ಪಂಗಡವೂ ತನ್ನದೇ ಆದ ಸರವನ್ನು ಹೊಂದಿದೆಯಾದರೂ ಎಲ್ಲರೂ ಸಾಮಾನ್ಯವಾಗಿ ಬಳಸುವ ಮಾಲೆಯೂ ಒಂದಿದೆ. ಅದರ ಜೆಸರಿ ಶೊ-ಜುಕು-ಇಬ್ಭಾಗ ಮಾಡುತ್ತವೆ. ಇವಕ್ಕೆ ಬೇರೆ ಮಣಿಗಳನ್ನು ದಾರಗಳಲ್ಲಿ ಕಟ್ಟಲಾಗಿದೆ. ಹೀಗೆ ಒಂದು ಸರದಲ್ಲಿ ಮಣಿಗಳ ಅನೇಕ ಕವಲುಗಳಿವೆ, ಜಪಾನೀಯರ ಸಾಮಾಜಿಕ ಮತ್ತು ಧಾರ್ಮಿಕ ಜೀವನದಲ್ಲಿ ಜಪಸರ ಬಹು ಮುಖ್ಯ ಪಾತ್ರ ವಹಿಸಿದೆ.

ಮಹಮ್ಮದೀಯರಲ್ಲಿ ನೂರು ಮಣಿಗಳ ಸರವಿದೆ. ಇದರಲ್ಲೊಂದು ಮೇರು. ಬೇರೆ ವಸ್ತು ಅಥವಾ ಆಕೃತಿಗಳಿಂದಾದ ಮಣಿಗಳಿಂದಾಗಿ ಈ ಸರ ಮೂವತ್ತು ಮೂರರ ಮೂರು ಮೂರು ಭಾಗವಾಗಿರುತ್ತದೆ. ಇದರ ಜೊತೆಗೆ ನೂರೊಂದು ಹಾಗು ಮೂವತ್ತು ಮೂರು ಮಣಿಗಳ ಸರಗಳೂ ಇವೆ. ಮಹಾಬಿಯೋ ಪಂಗಡದವರು ತಮ್ಮ ಬೆರಳುಗಳಲ್ಲಿ ಎಣಿಸುತ್ತಾರೆ. ಇದಕ್ಕೆ ಕೊರಾನಿನ ಒಪ್ಪಿಗೆ ಇಲ್ಲವೆಂದು ಹೇಳಲಾಗಿದೆ. ಮಕ್ಕಾದ ಮಣ್ಣಿನಿಂದ ಮಾಡಿದ ಮಣಿಗಳ ಮಾಲೆಯೂ ಬಳಕೆಯಲ್ಲಿದೆ.

ರೋಮನ್ ಕ್ಯಾತೊಲಿಕ್ ಚರ್ಚಿನವರು 150 ಮಣಿಗಳ ಸರವಿಟ್ಟುಕೊಂಡಿದ್ದಾರೆ. ಇದು ದಪ್ಪ ಮಣಿಗಳಿಂದ ಹತ್ತು ಸಮ ಭಾಗಗಳಾಗಿ ವಿಭಕ್ತವಾಗಿದೆ. ಇದಕ್ಕೆ ಒಂದು ಶಿಲುಬೆ ಆಕೃತಿಯ ಪದಕವೂ ಒಂದು ದೊಡ್ಡ ಹಾಗೂ ಎರಡು ಚಿಕ್ಕ ಮಣಿಗಳೂ ಇರುತ್ತವೆ. ಒಂದೊಂದು ಧಾರ್ಮಿಕ ಪಂಥದವರು ಬಳಸುವ ಹಾಗೂ ಒಂದೊಂದು ಬಗೆಯ ಸೇವೆಗಾಘಿ ನಿರ್ದಿಷ್ಟವಾದ ನಾನಾಬಗೆಯ ಜಪಸರಗಳಿವೆ. ಮಂತ್ರ ಹಾಗೂ ದಿವ್ಯಜಲದಿಂದ ಪುರೋಹಿತರು ಪವಿತ್ರೀಕರಿಸಿದ ಸರಗಳನ್ನು ಭಕ್ತರು ಪಡೆದುಕೊಂಡು ಉಪಯೋಗಿಸಬೇಕು. ಲೆಪಾಂಟ್ ಯುದ್ಧದ ನೆನಪಿಗಾಗಿ ಅಕ್ಟೋಬರಿನ ಮೊದಲ ಭಾನುವಾರವನ್ನು ಜಪಸರ ಹಬ್ಬವೆಂದು ಆಚರಿಸುವರು. ಗ್ರೀಕ್ ಆರ್ಥೊಡಾಕ್ಸ್ ಚರ್ಚಿನ ಮಠಗಳಲ್ಲಿ ಜಪಮಾಲೆಗೆ ಬದಲು ಗಂಟುಗಳಿರುವ ಹಗ್ಗವನ್ನು ಬಳಸುತ್ತಾರೆ.

ಯೆಹೂದ್ಯರಲ್ಲಿ ಜಪಸರ ತನ್ನ ಧಾರ್ಮಿಕ ಪ್ರಾಮುಖ್ಯವನ್ನು ಕಳೆದುಕೊಂಡಿದೆ. (ಆರ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ